    ಮೂಲದೊಡನೆ ಪರಿಶೀಲಿಸಿ

ಕೇಂಬ್ರಿಯನ್ (ಅರ್ಡೊವಿಶಿಯನ್ ಸ್ತೋಮ)

ಪೇಲಿಯೋಜೋಯಿಕ್ ಯುಗದ ಪ್ರಥಮ ಕಲ್ಪ; ಸುಮಾರು 600 ದಶಲಕ್ಷ ವರ್ಷ ಪ್ರಾಚೀನದಿಂದ 500 ದಶಲಕ್ಷ ವರ್ಷ ಪ್ರಾಚೀನದವರೆಗಿನ ಅವಧಿ; ವಿಪುಲ ಫಾಸಿಲುಗಳನ್ನು ಒಳಗೊಂಡಿರುವ ಅತಿ ಕೆಳಗಿನ ಭೂವೈಜ್ಞಾನಿಕ ವ್ಯವಸ್ಥೆ. ರೂಢಿಯಲ್ಲಿ, ಫಾಸಿಲ್‍ಯುಕ್ತ ಸ್ತರಗಳಿಗೂ ಸಮಕಾಲೀನ ಫಾಸಿಲ್‍ರಹಿತ ಶಿಲಾಸ್ತೋಮಗಳಿಗೂ ಇರುವ ಹೆಸರು. ಕೇಂಬ್ರಿಯನ್ ಎಂಬ ಹೆಸರನ್ನೂ ಪರಿಕಲ್ಪನೆಯನ್ನೂ ಸೂಚಿಸಿ (1835) ಬಳಕೆಗೆ ತಂದವ ಎ. ಸೆಡ್ಜಿವಿಕ್. ಸ್ಪಷ್ಟವಾಗಿ ಮತ್ತು ಸಂದೇಹಕ್ಕೆ ಆಸ್ಪದ ಇಲ್ಲದ ರೀತಿಯಲ್ಲಿ ರಕ್ಷಿಸಲ್ಪಟ್ಟಿರುವ ಗತಕಾಲಗಳ ಜೀವರಾಶಿಗಳಲ್ಲಿ ಈ ಶಿಲಾಸ್ತೋಮದ ಜೀವರಾಶಿಯೇ ಅತ್ಯಂತ ಪ್ರಾಚೀನವಾದದ್ದು. ಆದ್ದರಿಂದಲೇ ಕೇಂಬ್ರಿಯನ್ ಸ್ತೋಮ ಭೂ ಇತಿಹಾಸಜ್ಞರ ಗಮನವನ್ನು ಸೆಳೆಯುತ್ತದೆ. ಕೇಂಬ್ರಿಯನ್ ಕಲ್ಪದ ಪ್ರಾರಂಭದಿಂದ ಭೂ ಇತಿಹಾಸದ ಛಾಯೆ ಬದಲಾಗುತ್ತದೆ. ಪೂರ್ವ ಕೇಂಬ್ರಿಯನ್ ಕಾಲಗಳ ಅಧ್ಯಯನದಲ್ಲಿ ಕಾಣುವ ಅಸ್ಪಷ್ಟತೆ ಈ ಕಲ್ಪದಲ್ಲಿ ಮಾಯವಾಗಿ ಸ್ಪಷ್ಟ ಮತ್ತು ನಿಖರವಾದ ಘಟನಾ ಪರಂಪರೆಗಳನ್ನು ಅರಿಯಲು ಸಾಧ್ಯವಾಗುತ್ತದೆ. 

	ಪ್ರಪಂಚದ ಎಲ್ಲ ಕಡೆಗಳಲ್ಲಿಯೂ ಕೇಂಬ್ರಿಯನ್ ಸ್ತೋಮಗಳಲ್ಲಿ ಶಿಲಾ ಸಂಯೋಜನೆ ಒಂದೇ ರೀತಿ ಇರುವುದು ಕಂಡುಬಂದಿದೆ. ಈ ಶಿಲಾಸ್ತೋಮಗಳಲ್ಲಿ ಸಾಮಾನ್ಯವಾಗಿ ಪೆಂಟೆಶಿಲೆ, ಕೆಂಪು ನೊರಜು ಶಿಲೆ, ಬೆಣಚು ಶಿಲೆ ಮತ್ತು ಗ್ರೇವೇಕ್ ಶಿಲೆಗಳು ಹೆಚ್ಚು ; ಜೇಡು ಶಿಲೆ ಮತ್ತು ಸುಣ್ಣ ಶಿಲೆಗಳ ಪರಿಮಾಣ ಅಲ್ಪ. ಅವುಗಳಲ್ಲಿ ಪ್ರವಾಹದ ಗುರುತು ಅಲೆಗಳ ಗುರುತು ಮತ್ತು ಬಿಸಿಲು ಬಿರುಕುಗಳು ಇವೆ. ಆದ್ದರಿಂದ ಈ ಶಿಲೆಗಳು ಉತ್ತಳ ನೀರಿನಲ್ಲಿದ್ದಿರಬೇಕೆಂದೂ ಕೆಲವು ಸಲವಾದರೂ ನೀರು ಆರಿದುದರ ಪರಿಣಾಮವಾಗಿ ಒಣಗಿರಬಹುದೆಂದು ತಿಳಿಯಬಹುದು. ಕೇಂಬ್ರಿಯನ್ ಶಿಲಾಸ್ತೋಮಗಳೂ 500 ದಶಲಕ್ಷ ವರ್ಷಗಳ ಹಿಂದಿನವುಗಳಾದ್ದರಿಂದ ಅವು ಬಹು ಕಲಕಲ್ಪಟ್ಟು ಮಡಿಕೆಗಳಾಗಿಯೂ ಸ್ತರಭಂಗ ಹೊಂದಿ ಸ್ಥಳಾಂತರಿಸಲ್ಪಟ್ಟು ರೂಪಾಂತರ ಹೊಂದಿಯೂ ಇರುವುದು ಸ್ವಾಭಾವಿಕ. ಅವುಗಳಲ್ಲಿ ಕೆಲವೆಡೆಗಳಲ್ಲಿ ಶಿಲಾರಸ ಅಂತಸ್ಸರಣಗೊಂಡಿರುತ್ತದೆ.

	ಕೇಂಬ್ರಿಯನ್ ಶಿಲಾಸ್ತೋಮ ಒಲೆನೆಲ್ಲಸೆ ಎಂಬ ಟ್ರೈಲೊಬೈಟ್ ಪ್ರಾಣಿಯ ಅವಶೇಷಗಳಿಂದ ಕೂಡಿರುವ ನಿಕ್ಷೇಪದೊಂದಿಗೆ ಪ್ರಾರಂಭವಾಗುವುದೆಂದು ಪರಿಗಣಿಸಲಾಗಿದೆ. ಆದರೆ ಅದರ ಅಂತ್ಯವನ್ನು ಕುರಿತು ಖಚಿತ ನಿರ್ಧಾರ ಆಗಿಲ್ಲ. ಈ ಶಿಲಾಸ್ತೋಮದ ಮೇಲೆ ಜೇಡು ಶಿಲೆಗಳಿವೆ. ಇವುಗಳಿಗೆ ಟ್ರೆಮೆಡಿಕ್ ಶಿಲೆಗಳು ಎಂದು ಹೆಸರು. ಮೊದಲು ಈ ಶಿಲೆಗಳನ್ನು ಕೆಂಬ್ರಿಯನ್ ಸ್ತೋಮದ ಮೇಲ್ಭಾಗ ಎಂದು ಪರಿಗಣಿಸಲಾಗಿತ್ತು. ಆದರೆ ಇವುಗಳಲ್ಲಿರುವ ಫಾಸಿಲುಗಳು ಆರ್ಡೊವಿಶಿಯನ್ ಕಲ್ಪದ ಫಾಸಿಲುಗಳ ಸಮೀಪ ಬಾಂಧವ್ಯವನ್ನು ವ್ಯಕ್ತಪಡಿಸುತ್ತವೆ.  ಹೀಗಾಗಿ ಈ ಶಿಲೆಗಳನ್ನು ಈಗ ಆರ್ಡೊವಿಶಿಯನ್ ಸ್ತೋಮಕ್ಕೆ (ಸುಮಾರು 500 ದಶಲಕ್ಷ ವರ್ಷ ಪ್ರಾಚೀನದಿಂದ 440 ದಶಲಕ್ಷ ವರ್ಷ ಪ್ರಾಚೀನದವರೆಗಿನ ಅವಧಿ, ಕೇಂಬ್ರಿಯನ್ ಕಲ್ಪದ ತರುವಾಯ ಬಂದ ಕಲ್ಪ) ವರ್ಗಾಯಿಸಿದೆ. ಕೇಂಬ್ರಿಯನ್ ಮತ್ತು ಆರ್ಡೊವಿಶಿಯನ್ ಸ್ತೋಮಗಳ ಸಂಪರ್ಕ ಕೆಲವೆಡೆಗಳಲ್ಲಿ ಸ್ಪಷ್ಟ ಅನನುರೂಪತೆಯನ್ನು ತೋರಿಸುತ್ತದೆ. 

	ಕೇಂಬ್ರಿಯನ್ ಕಲ್ಪದ ಅಂತ್ಯ ಭಾಗಕ್ಕೆ ಸೇರಿರುವ ಸ್ವೀಡನ್ನಿನ ಕೋಮ್ ಶಿಲೆಗಳ ವಯಸ್ಸನ್ನು ಅವುಗಳಲ್ಲಿರುವ ರೇಡಿಯೋ ವಿಕಿರಣ ಖನಿಜಗಳ ಆಧಾರದ ಮೇಲೆ 440 ದಶಲಕ್ಷ ವರ್ಷಗಳೆಂದು ನಿರ್ಧರಿಸಲಾಗಿದೆ. ಬ್ರಿಟನ್ನಿನ ವೇಲ್ಸ್ ಪ್ರದೇಶದಲ್ಲಿ ಕೇಂಬ್ರಿಯನ್ ಸ್ತೋಮವನ್ನು ಈ ರೀತಿ ವಿಭಜಿಸಿರುತ್ತಾರೆ.

ಮೇಲ್ಭಾಗ ಅಥವಾ ಒಲೆನಸ್ ಶ್ರೇಣಿಗಳು
}
ಟ್ರೆಮೆಡಿಕ್ ಸ್ಲೇಟುಗಳು ಲಿಂಗ್ಯುಲ ಪ್ಲಾಗ್ಸ್ (ಒಲೆನಸ್, ಲಿಂಗ್ಯುಲೆಲ್ಲ)

ಮಧ್ಯಭಾಗ ಅಥವಾ ಪ್ಯಾರಡಾ ಕ್ಲೈಡಿಸ್ ಶ್ರೇಣಿಗಳು
}
ಮೆನೆವಿಯನ್ ಶಿಲೆಗಳು (ಪ್ಯಾರಡಾಕೆÀ್ಸ್ಯಡಿಸ್)

ಕೆಳಭಾಗ ಅಥವಾ ಒಲೆನೆಲ್ಲಸ್ ಶ್ರೇಣಿಗಳು
}
ಆರ್ಲಿಕ್ ಮತ್ತು ಲ್ಯಾನ್‍ಬೆರಿಸ್ ಶಿಲಾಗುಂಪು ಮತ್ತು ಜ್ವಾಲಾಮುಖಿಜ ಶಿಲೆಗಳು (ತಳ ತಿಳಿದುಬಂದಿಲ್ಲ) (ಒಲೆನೆಲ್ಲಸ್)

	ಉತ್ತರ ಅಮೇರಿಕದಲ್ಲಿ ಪೇಲಿಯೋಜೋಯಿಕ್ ಯುಗದ ಇತಿಹಾಸ ಎರಡು ಸಾಗರ ನಿಕ್ಷೇಪ ಪ್ರದೇಶಗಳೊಡನೆ ಹೆಣೆದುಕೊಂಡಿದೆ. ಅವುಗಳಲ್ಲಿ ಕಾರ್ಡಿಲೆರನ್ ಪ್ರದೇಶ ಒಂದು. ಇದು ಕೆನಡಾದ ಆಲ್ಬರ್ಟ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು. ಇದರ ರಾಕಿಪರ್ವತ ಭಾಗದಲ್ಲಿರುವ ಕೇಂಬ್ರಿಯನ್ ಸ್ತೋಮಗಳು ಪ್ರಪಂಚದಲ್ಲೆಲ್ಲ ಅತ್ಯುತ್ತಮ ರೀತಿಯಲ್ಲಿ ನಿಕ್ಷೇಪಗೊಂಡಿರುವ ಶಿಲೆಗಳು. ಅಪಲೇಚಿಯನ್ ಪ್ರದೇಶ ಎರಡನೆಯದು. ಇದು ಅಟ್ಲಾಂಟಿಕ ಸಾಗರದಿಂದ ಸೇಂಟ್ ಲರಮಿ ಮೂಲಕ ಈಗಿನ ಅಪಲೇಚಿಯನ್ ಪರ್ವತಗಳ ಉದ್ದಕ್ಕೂ ಮೆಕ್ಸಿಕೋ ಕೊಲ್ಲಿಯವರೆಗೆ ವ್ಯಾಪಿಸಿತ್ತು. ಅಮೆರಿಕದ ಕೇಂಬ್ರಿಯನ್ ಸ್ತೋಮಗಳು ಯೂರೋಪಿನ ಕೇಂಬ್ರಿಯನ್ ಸ್ತೋಮಗಳಿಗಿಂತ ವಿಶಾಲವಾಗಿವೆ. ಅವುಗಳ ದಪ್ಪವೂ ಹೆಚ್ಚು. ಫಾಸಿಲುಗಳ ಸಂಚಯನ ಇಲ್ಲಿ ವಿಪುಲ. ಹೀಗಿದ್ದರೂ ಯೂರೋಪಿನಲ್ಲಿ ಕಂಡುಬರುವ ಪ್ರಾಣಿಗಳ ಜಾತಿವಿಧಗಳೇ ಇಲ್ಲಿಯೂ ಕಂಡುಬರುತ್ತವೆ. ಆದ್ದರಿಂದ ಯೂರೋಪಿನ ತೆರನಾಗಿ ಇಲ್ಲಿನ ಶಿಲಾಸ್ತೋಮಗಳನ್ನು ಸಹ ಮೂರು ಭಾಗಗಳಾಗಿ ವಿಭಜಿಸಿ ಅಲ್ಲಿನ ಭಾಗಗಳಿಗೆ ಕ್ರಮವಾಗಿ ಸರಿದೂಗಿಸಲು ಸಾಧ್ಯವಾಗಿದೆ.

ಮೇಲ್ಭಾಗ ಅಥವಾ ಪಾಟ್ಸ್‍ಡಾಮ್ ಶ್ರೇಣಿ
....
(ಒಲೆನಸ್, ಡೈಕೆಲೊಕೆಫೆಲಸ್)

ಮಧ್ಯಭಾಗ ಅಥವಾ ಅಕಡಿಯನ್
....
(ಪ್ಯಾರಡಾಕ್ಸೈಡಿಸ್)

ಕೆಳಭಾಗ ಅಥವಾ ಜಾರ್ಜಿಯನ್
....
(ಒಲೆನೆಲ್ಲಸ್)

ಭಾರತ
ಕೇಂಬ್ರಿಯನ್ ಕಾಲದ ಶಿಲಾನಿಕ್ಷೇಪಗಳು ಭಾರತ ಪರ್ಯಾಯ ದ್ವೀಪದ ಹೊರಭಾಗದಲ್ಲಿ ನಿಕ್ಷೇಪಗೊಂಡಿವೆ, ಅದರಲ್ಲಿ ಈ ಮೂರು ಸ್ಥಳಗಳಲ್ಲಿ ಸಾಕಷ್ಟು ಪರಿಶೋಧನೆ ನಡೆದಿದೆ : 1 ಸಾಲ್ಟ್‍ರೇಂಜ್ ಪ್ರದೇಶ, 2 ಸ್ಪಿಟಿ ಕಣಿವೆ ಪ್ರದೇಶ, 3 ಕಾಶ್ಮೀರ ಪ್ರದೇಶ.
1 ಸಾಲ್ಟ್‍ರೇಂಜ್ : ಈ ಪ್ರದೇಶದಲ್ಲಿ ಕೇಂಬ್ರಿಯನ್ ಕಲ್ಪದ ಶಿಲೆಗಳು ಪೂರ್ಣವಾಗಿ ರೂಪುಗೊಂಡಿರುವುದರಿಂದ ಇದನ್ನು ಕೇಂಬ್ರಿಯಮ್ ಸ್ತೋಮಗಳ ಮಾದರಿ ಪ್ರದೇಶವೆಂದು ಪರಿಗಣಿಸಲಾಗಿದೆ. ಇದರ ವ್ಯಾಪ್ತಿ ಪಾಟ್‍ವಾರ್ ಮೈದಾನಕ್ಕೆ ದಕ್ಷಿಣದಲ್ಲಿ ಪೂರ್ವ ರೇಖಾಂಶ 71ಲಿ-74ಲಿಯವರೆಗೆ (ಝೀಲಂ ಮತ್ತು ಸಿಂಧೂ ನದಿಗಳ ಮಧ್ಯೆ) ಇದೆ. ಇಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ತೆರಳಿದಂತೆ ಕಿರಿಯ ಶಿಲೆಗಳು ಸಿಕ್ಕುತ್ತವೆ. ಇಲ್ಲಿಯ ಕೇಂಬ್ರಿಯನ್ ಶಿಲಾ ಪರಂಪರೆ ಈ ರೀತಿ ಇದೆ : 
ಕೃತಕ ಲವಣ ಸ್ಫಟಿಕದ ಜೇಡು ಶಿಲೆಗಳು
...
350'

ಮ್ಯಾಗ್ನೀಸಿಯಂ ಮರಳು ಶಿಲೆ 
...
250'

ನಿಯೋಬಲಸ್ ಪದರಗಳು 
...
150'

ಊದಾ ಮರಳು ಶಿಲೆಗಳು
...
250'-450'

ಲವಣ ಶಿಲಾ ಶ್ರೇಣಿ
...
1500'

	
ಲವಣಶಿಲಾ ಶ್ರೇಣಿ ಸುಣ್ಣ ಮಿಶ್ರ ಜೇಡಿನಿಂದ ಆಗಿದೆ. ಇದರ ಬಣ್ಣ ಕೆಂಪು ಅಥವಾ ಊದಾ. ಇದರಲ್ಲಿ ಪದರುಗಳಿಲ್ಲ. ಈ ಶ್ರೇಣಿಯಲ್ಲಿ ಉಪ್ಪು, ಜಿಪ್ಸ್‍ಂ, ಸುಣ್ಣ ಮತ್ತು ಮ್ಯಾಗ್ನೀಸಿಯಂ ಕಾರ್ಬೋನೇಟ್‍ಗಳು ಹರಡಿವೆ. ಗಣಿಗಳ ಆಳ ಪ್ರದೇಶದಲ್ಲಿ ಅಲ್ಲಲ್ಲಿ ಪದರುಗಳಿರುವುದು ಕಂಡುಬಂದಿದೆ. ಇವು ಒತ್ತಡದಿಂದಾದವು. ಲವಣಶಿಲಾ ಶ್ರೇಣಿಯನ್ನು ಮೂರು ಭಾಗಗಳನ್ನಾಗಿ ವಿಭಜಿಸಬಹುದು. ಕೆಳಭಾಗ ಮತ್ತು ಮೇಲ್ಭಾಗಗಳಲ್ಲಿ ಬಿಟ್ಯೂಮಿನಸ್ ಜೇಡುಶಿಲೆ, ಡಾಲೋಮೈಟ್, ಕಲ್ಲಾರ್ ಎಂಬ ಅಶುದ್ಧ ಲವಣ ಶಿಲೆಗಳು ಹೆಚ್ಚಾಗಿವೆ. ಮಧ್ಯಭಾಗದಲ್ಲಿ ಶುದ್ಧ ಲವಣಶಿಲಾ ಪದರುಗಳಿವೆ. ಲವಣಶಿಲೆಯನ್ನು ಖಿವ್ರ, ವಾರ್ತಾ ಮತ್ತು ಕಲಾಬಾಗ್ ಎಂಬ ಸ್ಥಳಗಳಲ್ಲಿ ಹೊರತೆಗೆಯಲಾಗುತ್ತಿದೆ. ಲವಣ ಶಿಲೆಗಳು ಉತ್ಪತ್ತಿಯಾದ ಬಗ್ಗೆ ಅನೇಕ ರೀತಿಯ ವಿವರಣೆಗಳನ್ನು ನೀಡಲಾಗಿದೆ. ಜಲಶಿಲೆಗಳೊಳಗೆ ಶಿಲಾಪಾಕ ನುಗ್ಗಿದುದರ ಪರಿಣಾಮವಾಗಿ ಲವಣೋತ್ಪತ್ತಿಯಾಗಿರಬೇಕೆಂದು ಮಿಡಲ್‍ಮಿಸ್ ಎಂಬಾತನ ಅಭಿಪ್ರಾಯ. ಹಿಂದಿನ ಶಿಲೆಗಳು ಅನಿಲಾಚರಣೆಯಿಂದ ರೂಪಾಂತರ ಹೊಂದಿ ಜಿಪ್ಸ್‍ಂ ಮತ್ತು ಲವಣ ಶಿಲೆಗಳಾಗಿರಬೇಕೆಂದು ಓಲ್ಡ್‍ಹ್ಯಾಮ್ ಹೇಳುತ್ತಾನೆ. ಪಾಸ್ಕೋ ಎಂಬಾತನ ಚಿಂತನೆ ಬೇರೆ ವಿಧ. ಅವನ ಪ್ರಕಾರ ಲವಣ ಶಿಲಾ ಶ್ರೇಣಿ ಇಯೋಸೀನ್ ಕಲ್ಪದಲ್ಲಿ ನಿಕ್ಷೇಪಗೊಂಡ ಜಲಶಿಲೆಗಳೆಂದು ಅನಂತರ ಅದು ಊದಾ ಮರಳು ಶಿಲೆಗಳ ಕೆಳಗೆ ನುಗ್ಗಿಸಲ್ಪಟ್ಟಿದೆ ಎಂದು ಇದೆ. ಕ್ರಿಸ್ತಿ ಎಂಬಾತ ಲವಣಶಿಲಾ ಶ್ರೇಣಿ ಜಲಶಿಲೆಗಳೆಂದು ಸಮುದ್ರ ನಿರ್ಗಮನಕ್ಕೆ ಮುಂಚೆ ಲವಣಾಂಶ ಹೆಚ್ಚಾಗಿ ಈ ನಿಕ್ಷೇಪ ಉಂಟಾಗಿರಬೇಕೆಂದು ಹೇಳುತ್ತಾನೆ. ಇದರಲ್ಲಿ ಪದರಗಳಿಲ್ಲದಿರುವಿಕೆ ಹಾಗೂ ಇದರ ಆಕಾರ ಲವಣದ ಮೃದು ಮತ್ತು ಮೇಣ ಸ್ವಭಾವದ ಪರಿಣಾಮವೆಂದು ಆತ ವಾದಿಸುತ್ತಾನೆ. 

	ಲವಣಶಿಲಾ ಶ್ರೇಣಿಯ ವಯಸ್ಸಿನ ವಿಚಾರ ವಿವಾದವುಂಟು. ಲವಣಶಿಲಾ ವರ್ಗ ಮತ್ತು ಅದರ ಮೇಲಿರುವ ಊದಾ ಮರಳು ಶಿಲೆಯ ಸಂಪರ್ಕ ಅಸಮಾನತರಹದ್ದಾಗಿದೆ. ಅದು ಸಾಮಾನ್ಯ ಜಲಜಶಿಲಾ ಸಂಪರ್ಕದಂತಿಲ್ಲ. ಅಲ್ಲದೆ ಪದರುಗಳ ಕಲಕುವಿಕೆಯನ್ನು ಅದು ಸೂಚಿಸುತ್ತದೆ. ಈ ಅಂಶವನ್ನು ಎರಡೂ ರೀತಿಯಲ್ಲಿ ವಾದ ಮಾಡಲಾಗಿದೆ. ಒಂದನೆಯದಾಗಿ ಲವಣಶಿಲಾ ವರ್ಗ ಬಹು ಮೃದು ಮತ್ತು ಯಾವ ಆಕಾರವನ್ನು ಬೇಕಾದರೂ ಹೊಂದಬಲ್ಲ ಅಶಕ್ತ ಶಿಲೆ. ಅದರ ಮೇಲಿರುವ ಊದಾ ಮರಳು ಶಿಲೆ ಗಟ್ಟಿ ಸ್ವಭಾವದ ಶಕ್ತ ಶಿಲೆ. ಈ ಎರಡು ವಿಭಿನ್ನ ಶಿಲೆಗಳ ಮಧ್ಯೆ ನಡೆದಿರುವ ಚಲನೆಯೆ ಅವೆರಡರ ಮಧ್ಯೆ ಅಸಮಾನ ಸಂಪರ್ಕವನ್ನುಂಟು ಮಾಡಿದೆ. ಎರಡನೆಯದಾಗಿ ಈ ಲವಣ ಶಿಲೆ ಬಹು ಮೃದು ಮತ್ತು ಸುಲಭವಾಗಿ ದ್ರವರೂಪಕ್ಕೆ ತಿರುಗಬಲ್ಲದು. ಆದ್ದರಿಂದ ಇದು ಮತ್ತೆಲ್ಲಿಯೋ ನಿಕ್ಷೇಪಗೊಂಡು ಊದಾ ಮರಳುಶಿಲೆಯ ಕೆಳಗೆ ನುಗ್ಗಿಸಲ್ಪಟ್ಟಿದೆ. ಹೀಗಾಗಿ ಅದು ಈಗ ಆಕ್ರಮಿಸಿಕೊಂಡಿರುವ ಕೋಹಟ್ ಪ್ರದೇಶದಲ್ಲಿ ಮತ್ತೊಂದು ಲವಣಶಿಲಾ ಶ್ರೇಣಿಯಿದೆ. ಅದರ ವಯಸ್ಸು ಇಯೋಸೀನ್ (ಸುಮಾರು 60 ದಶಲಕ್ಷ ವರ್ಷಗಳ ಪ್ರಾಚೀನದಿಂದ ನಲವತ್ತು ದಶಲಕ್ಷ ವರ್ಷಗಳ ಪ್ರಾಚೀನದವರೆಗಿನ ಅವಧಿ).  ಈ ಎರಡು ಪ್ರದೇಶಗಳ ಲವಣ ಶಿಲೆಗಳಲ್ಲಿ ಸಾಮ್ಯವಿದೆ. ಆದ್ದರಿಂದ ಸಾಲ್ಟ್‍ರೇಂಜ್ ಪ್ರದೇಶದ ಲವಣ ಶಿಲಾ ಶ್ರೇಣಿ ಸಹ ಇಯೋಸೀನ್ ಕಲ್ಪದ್ದೇ ಇರಬೇಕೆಂದು ಅದು ಊದಾ ಮರಳು ಶಿಲೆಯ ಕೆಳಗೆ ನುಗ್ಗಿಸಲ್ಪಟ್ಟಿರುವುದರಿಂದ ಅದರ ವಯಸ್ಸು ಕೇಂಬ್ರಿಯನ್ ಆಗಲಾರದ್ದೆಂದೂ ಎರಡನೆಯ ಗುಂಪಿನವರ ವಾದ. 

	ಚಿಟ್ಟೆಡೆಲ್ ಪ್ರವಾಸಮಂದಿರದ ಹತ್ತಿರ ಕೇಂಬ್ರಿಯನ್ ಸ್ತೋಮದ ಪ್ರತಿಯೊಂದು ಭಾಗದೊಡನೆಯೂ ಅವುಗಳ ಮೇಲಿರುವ ತಾಲ್ಜೀರ್ ಗುಂಡುಶಿಲೆಯೊಡನೆಯೂ ಲವಣಶಿಲೆಗಳು ಸಾಮಾನ್ಯ ಜಲಜಶಿಲ ಸಂಪರ್ಕಗೊಂಡಿರುವುದು ಕಂಡುಬಂದಿದೆ. ಈ ಅಂಶ ಸಾಲ್ಟ್‍ರೇಂಜ್ ಲವಣ ಶಿಲಾ ಶ್ರೇಣಿ ಇಯೋಸೀನ್ ಕಲ್ಪದ್ದೆಂದು ನಿರ್ಣಯಿಸಲು ಅಡ್ಡಿಯಾಗಿದೆ. ಲವಣಶಿಲಾ ಶ್ರೇಣಿಯಲ್ಲಿ ಅನೇಕ ಸೂಕ್ಷ್ಮ ಫಾಸಿಲುಗಳನ್ನು ಮುಖ್ಯವಾಗಿ ಹೂ ಬಿಡುವ ಜಾತಿಯ ಗಿಡಗಳ ಅವಶೇಷಗಳು (ಪರಾಗಗಳು) ಇರುವುದನ್ನು ಬೀರ್‍ಬಲ್ ಸಾಹ್‍ನಿ ತೋರಿಸಿರುತ್ತಾರೆ. ಇವು ಲವಣ ಶಿಲಾ ಶ್ರೇಣಿಯ ಬಿಟ್ಯೂಮಿನಸ್ ಜೇಡುಶಿಲೆ ಮತ್ತು ಡಾಲೋಮೈಟ್ ಜೇಡು ಶಿಲೆಗಳಲ್ಲೂ ಇವೆ.  ಈ ಶಿಲೆಗಳು ಗಟ್ಟಿ ಸ್ವಭಾವದವು. ಆದ್ದರಿಂದ ಅವುಗಳೊಳಕ್ಕೆ ಫಾಸಿಲುಗಳು ವಲಸೆ ಬಂದಿವೆ ಎಂದು ಹೇಳಲಾಗುವುದಿಲ್ಲ. ಅವು ಈ ಶಿಲೆಗಳ ಮೂಲ ಅವಶೇಷಗಳೆಂದೆ ಹೇಳಬೇಕಾಗುವುದು. ಈ ಅಂಶ ಲವಣಶಿಲಾ ಶ್ರೇಣಿಯ ವಯಸ್ಸು ಕೇಂಬ್ರಿಯನ್ ಎಂದು ನಿರ್ಣಯಿಸಲು ಅಡ್ಡಿಯಾಗಿದೆ.

	ಊದಾ ಮರಳು ಶಿಲೆ ಲವಣಶಿಲಾ ಶ್ರೇಣಿಯ ಮೇಲಿದೆ. ಇದು ಸೂಕ್ಷ್ಮ ಕಣಗಳಿಂದ ಕೂಡಿದ ಊದಾ ಬಣ್ಣದ ಮರಳು ಶಿಲೆ. ಇದರಲ್ಲಿ ಪ್ರವಾಹದ ಮತ್ತು ಅಲೆಗಳ ಗುರುತುಗಳಿರುವುದರಿಂದ ಇದು ಆಳವಿಲ್ಲದ ಸಾಗರ ಪ್ರದೇಶದಲ್ಲಿ ನಿಕ್ಷೇಪಗೊಂಡಿದೆ ಎಂದು ಹೇಳಬಹುದು. ಇದು ಸಂಪೂರ್ಣವಾಗಿ ಫಾಸಿಲು ರಹಿತವಾಗಿದೆ. ಹೀಗೆ ಊದಾ ಮರಳುಶಿಲೆ ವಿಂಧ್ಯನ್ ಸ್ತೋಮದ ರೇವಾ ಮತ್ತು ಬಂಧರ್ ಮರಳು ಶಿಲೆಗಳನ್ನು ಹೋಲುತ್ತದೆ. ಊದಾ ಮರಳುಶಿಲೆಗಳ ಮೇಲೆ ಜೇಡುಶಿಲೆಗಳಿವೆ. ಇವುಗಳಲ್ಲಿ ನಿಯೋಬಲಸ್ ಎಂಬ ಬ್ರೇಕಿಯೋಪೋಡ ಪ್ರಾಣಿಯ ಅವಶೇಷಗಳಿರುವುದರಿಂದ ಇವುಗಳಿಗೆ ನಿಯೋಬಲಸ್ ಪದರುಗಳು ಎಂದು ಹೆಸರು. ನಿಯೋಬಲಸ್ ಅಲ್ಲದೆ ಲಿಂಗ್ಯುಲ, ಲಿಂಗ್ಯುಲೆಲ್ಲಾ ಮತ್ತು ಆರ್ಕೀಸ್ ಎಂಬ ಬ್ರೇಕಿಯೋಪೋಡ ಪ್ರಾಣಿಗಳ ಅವಶೇಷಗಳು ಬೇಕೋಪೇರಾ, ರೆಡ್ಲಿಕಿಯ ಮತ್ತು ಕೋನೋಕೆಪಲಸ್ ಜಾತಿಯ ಟ್ರೈಲೋಬೈಟ್‍ಗಳೂ ಹಯೋಲಿತಿಸ್ ಎಂಬ ಟಿರೋಪಾಡ್ ಪ್ರಾಣಿಯ ಅವಶೇಷಗಳೂ ಇವೆ. ಈ ಅವಶೇಷಗಳು ಕೇಂಬ್ರಿಯಮ್ ಕಲ್ಪದ ಮಧ್ಯಭಾಗವನ್ನು ಸೂಚಿಸುತ್ತದೆ. ನಿಯೋಬಲಸ್ ಪದರಗಳ ಮೇಲೆ ಸಾಲ್ಟ್‍ರೇಂಜ್ ಪ್ರದೇಶದ ಪೂರ್ವ ಭಾಗದಲ್ಲಿ ಕೆನೆ ಬಣ್ಣದ ಡಾಲೋಮೈಟ್, ಜೇಡುಮಿಶ್ರ ಡಾಲೋಮೈಟ್ ಮತ್ತು ತೆಳುವಾದ ಜೇಡುಮಿಶ್ರ ಪದರಗಳೂ ನಿಕ್ಷೇಪಗೊಂಡಿವೆ. ಇವುಗಳಿಗೆ ಮೆಗ್ನೀಷಿಯಂ ಮರಳುಶಿಲೆಗಳೆಂದು ಹೆಸರು. ಈ ಶಿಲೆಗಳ ಮೇಲೆ ಲವಣಸ್ಫಟಿಕದ ಅಚ್ಚುಗಳಿಂದ ಕೂಡಿದ ಮರಳು ಮತ್ತು ಜೇಡು ಶಿಲೆಗಳಿವೆ. ಇವೇ ಕೃತಕ ಲವಣ ಸ್ಫಟಿಕದ ಜೇಡುಶಿಲೆಗಳು.

	2 ಸ್ಪಿಟಿ ಪ್ರದೇಶ : ಸ್ಪಿಟಿ ನದಿಯ ಉಪನದಿಯಾದ ಪರಹಿಯೋ ನದಿಯ ಕಣಿವೆಯಲ್ಲಿ ಕ್ರಿಟೇಷಿಯಸ್ (ನೋಡಿ) ಕಲ್ಪದ (ಸುಮಾರು 135 ದಶಲಕ್ಷ ವರ್ಷ ಪ್ರಾಚೀನದಿಂದ 65 ದಶಲಕ್ಷ ವರ್ಷಗಳ ಪ್ರಾಚೀನದವರೆಗಿನ ಅವಧಿ) ವರೆಗಿನ ಭೂ ಇತಿಹಾಸವನ್ನು ಕಾಣಬಹುದು. ಆರ್ಷೇಯ ಕಲ್ಪದ (ಸುಮಾರು 1850 ದಶಲಕ್ಷ ವರ್ಷಗಳ ಪ್ರಾಚೀನ ಮತ್ತು ಅದಕ್ಕಿಂತ ಹಿಂದೆ) ವೈಕ್ರಿತಾ ಶಿಲಾಸ್ತೋಮದ ಮೇಲೆ ಇರುವ ಶಿಲೆಗಳಿಗೆ ಹೈಮಂತಸ್ತೋಮಗಳೆಂದು ಹೆಸರು. ಇವನ್ನು ಕೆಳ, ಮಧ್ಯ ಮತ್ತು ಮೇಲಣ ಭಾಗಗಳಾಗಿ ವಿಭಜಿಸಿರುತ್ತಾರೆ. ಮೇಲ್ಭಾಗದ ಶಿಲೆಗಳಲ್ಲಿ ಮಾತ್ರ ಫಾಸಿಲುಗಳಿವೆ. ಇವು ಉತ್ತರ ಅಮೆರಿಕದ ಕೇಂಬ್ರಿಯನ್ ಪ್ರಾಣಿವರ್ಗವನ್ನು ಹೋಲುತ್ತವೆ ಮತ್ತು ಕೇಂಬ್ರಿಯನ್ ಕಲ್ಪದ ಅಂತ್ಯಕಾಲವನ್ನು ಸೂಚಿಸುತ್ತವೆ.

	3 ಕಾಶ್ಮೀರ : ಈ ಕಾಲದ ಶಿಲಾಸ್ತೋಮ ಹುಂಡವಾರ ಪ್ರದೇಶದಲ್ಲಿ ಬಹು ಸೊಗಸಾಗಿ ನಿಕ್ಷೇಪಗೊಂಡಿದೆ. ಈ ಶಿಲೆಗಳ ಕೆಳಬಾಗದಲ್ಲಿ ಎರೆಹುಳು ಜಾತಿಯ ಪ್ರಾಣಿಗಳು ಓಡಾಡಿದ ಜಾಡುಗಳು ಮತ್ತು ಅಸಮರ್ಪಕ ರಕ್ಷಿತ ಫಾಸಿಲುಗಳು ದೊರೆಯುತ್ತವೆ. ಇವು ಕೇಂಬ್ರಿಯನ್ ಕಲ್ಪದ ಆದಿಕಾಲವನ್ನು ಸೂಚಿಸುತ್ತವೆ. ಮೇಲ್ಬಾಗದ ಟ್ರೈಲೋಬೈಟ್ ಮತ್ತು ಬ್ರೇಕಿಯೋಪೋಡ್ ಗುಂಪಿನ ಪ್ರಾಣಿಗಳ ಅವಶೇಷಗಳಿವೆ. ಇವು ಕೇಂಬ್ರಿಯನ್ ಕಾಲದ ಅಂತ್ಯವನ್ನು ಸೂಚಿಸುತ್ತವೆ. 
  ಕೇಂಬ್ರಿಯನ್ ಕಲ್ಪದ ಜೀವರಾಶಿ : ಪೂರ್ವ ಕೇಂಬ್ರಿಯನ್ ಶಿಲಾಸ್ತೋಮಗಳು ಅನೇಕ ಸಾವಿರ ಅಡಿಗಳಷ್ಟು ನಿಕ್ಷೇಪಗೊಂಡಿವೆ. ಅವುಗಳಲ್ಲಿ ಅನೇಕ ಶಿಲೆಗಳು ಫಾಸಿಲುಗಳನ್ನು ಕಾದಿರಿಸಲು ಶಕ್ತವಾಗಿದ್ದವು. ಹಾಗಿದ್ದರೂ ನಿರ್ದಿಷ್ಟವಾದ ಫಾಸಿಲುಗಳು ಮಾತ್ರ ಅವುಗಳಲ್ಲಿ ಇಲ್ಲ. ಆದರೆ ಕೇಂಬ್ರಿಯನ್ ಶಿಲಾಸ್ತೋಮದ ಆದಿಯಲ್ಲೇ ಫಾಸಿಲುಗಳು ಇದ್ದಕ್ಕಿದ್ದ ಹಾಗೆ ಹೇರಳವಾಗಿ ಕಾದಿರಿಸಲ್ಪಟ್ಟಿವೆ. ಅವುಗಳಲ್ಲಿ ಬೆನ್ನೆಲುಬಿಲ್ಲದ ಪ್ರಾಣಿಗಳ ಏಳು ಮುಖ್ಯ ವರ್ಗಗಳು ಇವೆ. ಆ ಪ್ರಾಣಿಗಳು ವಿಕಾಸದ ಉನ್ನತಮಟ್ಟ ತಲಪಿದ್ದುದು ಒಂದು ವಿಶೇಷ ಸಂಗತಿ. ಚಾಲ್ರ್ಸ್ ವಾಲ್‍ಕಾಟ್ ಎಂಬಾತ ಬ್ರಿಟಿಷ್ ಕೊಲಂಬಿಯದ ಫೀಲ್ಡ್ ಎಂಬ ಪಟ್ಟಣದ ಹತ್ತಿರ ಇರುವ ವಾಪ್ತ ಬೆಟ್ಟದ ನೈಋತ್ಯಭಾಗದಲ್ಲಿ ಕೇಂಬ್ರಿಯನ್ ಸ್ತೋಮದ ಮಧ್ಯಭಾಗದಿಂದ ಒಂದು ಅಪೂರ್ವ ಜೀವ್ಯವಶೇಷ ರಾಶಿಯನ್ನೇ ಹೊರತೆಗೆದ (1910). ಗಡಸು ಅಂಗಗಳಿಲ್ಲದ ಮೃದುಶರೀರ ಪ್ರಾಣಿಗಳ ರಾಶಿ ಇದು. ಇದರಲ್ಲಿ ವಾಲ್‍ಕಾಟ್ 70 ಜಾತಿಗಳು ಮತ್ತು 120 ಪ್ರಭೇದಗಳನ್ನು ವರ್ಣಿಸಿದ್ದಾನೆ. ಇವುಗಳಲ್ಲಿ ಜಲ್ಲಿ ಫಿಷ್, ಹೋಲೊತೂರಿಯನ್ ಸ್ಪಾಂಜಸ್, ಎರೆಹುಳು ಮತ್ತು ಮೃದ್ವಂಗಿ ಜಾತಿಯ ಪ್ರಾಣಿಗಳಿವೆ. ಕೇಂಬ್ರಿಯನ್ ಶಿಲೆಗಳಲ್ಲಿ ಕಾದಿರಿಸಲ್ಪಡದ ಕೋಟ್ಯಂತರ ಮೃದು ಶರೀರ ಪ್ರಾಣಿಗಳು ಆ ಕಾಲದಲ್ಲೂ ಪೂರ್ವಕೇಂಬ್ರಿಯನ್ ಕಾಲದಲ್ಲೂ ಇದ್ದಿರಬೇಕೆಂದು ಮೇಲೆ ವಿವರಿಸಿರುವ ಅವಶೇಷಗಳ ಅವಲೋಕನದಿಂದ ತರ್ಕಿಸಬಹುದು.

	ಕೇಂಬ್ರಿಯನ್ ಕಾಲದ ಜೀವಿಗಳಲ್ಲಿ ಟ್ರೈಲೊಬೈಟ್‍ಗಳು ಪ್ರಧಾನ. ಅವು ಒಟ್ಟು ಜೀವವರ್ಗದ 70% ಇವೆ. ಬ್ರೇಕಿಯೊಪೋಡ್ಗಳು 20% ಮತ್ತು ಉಳಿದ ಪ್ರಾಣಿಗಳೆಲ್ಲ ಸೇರಿ 10% ಇವೆ. ಟ್ರೈಲೊಬೈಟ್‍ಗಳ ಆಧಾರದ ಮೆಲೆ ಕೇಂಬ್ರಿಯನ್ ಸ್ತೋಮಗಳನ್ನು ಅನೇಕ ಶಿಲಾಪಾದಗಳನ್ನಾಗಿ ವಿಂಗಡಿಸಲು ಸಾಧ್ಯವಾಗಿದೆ. ಕೇಂಬ್ರಿಯನ್ ಸ್ತೋಮಗಳನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿರುವುದು ಸರಿಯಷ್ಟೆ. ಪ್ರತಿಯೊಂದು ಭಾಗದ ಶಿಲೆಗಳೂ ಸುಮಾರು ಎರಡು ಮೂರು ಕೋಟಿ ವರ್ಷಗಳ ಅವಧಿಯಲ್ಲಿ ನಿಕ್ಷೇಪಗೊಂಡಿರುತ್ತವೆ. ಈ ದೀರ್ಘಾವಧಿಯಲ್ಲಿ ಟ್ರೈಲೊಬೈಟ್ ಪ್ರಾಣಿಗಳು ವಿಕಾಸಗೊಂಡು ಹೊಸ ಹೊಸ ಜಾತಿಗಳು ಉದಯಿಸಿರುವುದು ಸ್ವಾಭಾವಿಕ. ಅಮೆರಿಕದಲ್ಲಿ ಕೇಂಬ್ರಿಯನ್ ಸ್ತೋಮಗಳನ್ನು ಹದಿನಾರು ಶಿಲಾಪಾದಗಳನ್ನಾಗಿ ಯುರೋಪಿನಲ್ಲಿ ಹನ್ನೊಂದು ಶಿಲಾಪಾದಗಳನ್ನಾಗಿಯೂ ವಿಭಜಿಸಿರುತ್ತಾರೆ. ಹೀಗೆ ಒಲೆನೆಲ್ಲೆಸ್, ಕೆಲ್ಲವಿಯ ಕೇಂಬ್ರಿಯನ್ ಸ್ತೋಮದ ಕೆಳಭಾಗದಲ್ಲೂ ಪ್ಯಾರಡಾಕ್ಸೈಡಿಸ್, ಕೋನೋಕಾರಿಪೆ ಮಧ್ಯಭಾಗದಲ್ಲೂ ಒಲೆನಸ್, ಅಗ್ನಾಸ್ಟಸ್, ಡೈಕೆಲೊಕೆಪಲಸ್ ಮೇಲ್ಭಾಗದಲ್ಲೂ ವಿಶಿಷ್ಟ ಜಾತಿಯ ಟ್ರೈಲೊಬೈಟ್‍ಗಳೆನಿಸಿವೆ.
(ನೋಡಿ- ಆರ್ಡೊವಿಶಿಯನ್-ಸ್ತೋಮ)                      		
	(ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ